ಡೆಕಾತ್ಲಾನ್ -
	ವಿವಿಧ ರೀತಿಯ ಹತ್ತು ಅಥ್ಲೆಟಿಕ್ ಕ್ರೀಡೆಗಳ ಸಮೂಹ ಸ್ಪರ್ಧೆ. ಇಂಗ್ಲಿಷಿನ ಡೆಕ (ಹತ್ತು) ಅತ್ಲನ್ (ಸ್ಪರ್ಧೆ) ಎಂಬ ಪದಗಳನ್ನು ಸಂಯೋಜಿಸಿ ರೂಪಿಸಿದ ಪದವಿದು. ಪುರುಷರಿಗಾಗಿಯೇ ಮೀಸಲಾಗಿರುವ ಈ ಸ್ಪರ್ಧೆ ಎರಡು ದಿನಗಳು ನಡೆಯುತ್ತದೆ.

	ಇದರಲ್ಲಿ ಭಾಗವಹಿಸುವ ಸ್ಪರ್ಧಿ ಸರದಿಯ ಪ್ರಕಾರ ಒಂದಾದ ಮೇಲೆ ಮತ್ತೊಂದರಂತೆ ಈ ಕ್ರೀಡೆಗಳಲ್ಲಿ ಭಾಗವಹಿಸುತ್ತಾನೆ. ಮೊದಲನೆಯ ದಿನ 100 ಮೀ ಓಟ, ಲಾಂಗ್‍ಜಂಪ್, ಷಾಟ್‍ಪಟ್, ಹೈಜಂಪ್, 400 ಮೀ. ಓಟ; ಎರಡನೇ ದಿನ ಡಿಸ್ಕಸ್ ಎಸೆತ, 110 ಮೀ. ಹರ್ಡಲ್ಸ್, ಪೋಲ್‍ವಾಲ್ಟ್, ಜಾವೆಲಿನ್ ಎಸೆತ ಹಾಗೂ 1500 ಮೀ. ಓಟದ ಸ್ಪರ್ಧೆಗಳಿರುತ್ತವೆ. ಪ್ರತಿಯೊಂದು ಕ್ರೀಡೆಯಲ್ಲೂ ಗೆಲ್ಲಂಕಗಳನ್ನು (ಸ್ಕೋರ್ಸ್) ನೀಡಲಾಗುತ್ತದೆ. ಅತ್ಯಧಿಕ ಗೆಲ್ಲಂಕಗಳನ್ನು ಪಡೆದ ಕ್ರೀಡಾಪಟು ಜಯಶಾಲಿಯಾಗುತ್ತಾನೆ. ಅಂತಾರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ ಫೆಡರೇಷನ್ ಸಂಸ್ಥೆ ತಯಾರಿಸಿರುವ ಗೆಲ್ಲಂಕಗಳ ಪಟ್ಟಿಯ ಆಧಾರದ ಮೇಲೆ ಅವುಗಳನ್ನು ಪರಿಗಣಿಸಲಾಗುತ್ತದೆ.

	ಈ ಸ್ಪರ್ಧೆಯಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ನಿಯಮಗಳು ಹೀಗಿವೆ; 1 ಒಂದು ಸ್ಪರ್ಧೆಗೂ ಮತ್ತೊಂದು ಸ್ಪರ್ಧೆಗೂ ಕೊನೆಯ ಪಕ್ಷ 30 ಮಿನಿಟು ಕಾಲಾವಕಾಶವಿರಬೇಕು. 2. ಓಟದ ವಿಭಾಗದಲ್ಲಿ ಭಾಗವಹಿಸುವ ಸ್ಪರ್ಧಿಗಳನ್ನು ಚೀಟಿ ಎತ್ತುವುದರ ಮೂಲಕ ನಿರ್ಧರಿಸಿ ಇಬ್ಬರಿಗೆ ಕಡಿಮೆ ಇಲ್ಲದಂತೆ ಸ್ಪರ್ಧೆ ನಡೆಸಬೇಕು. ಒಂಬತ್ತು ಸ್ಪರ್ಧೆಗಳಾದ ಅನಂತರ ಅತಿ ಹೆಚ್ಚಿನ ಗೆಲ್ಲಂಕಗಳನ್ನು ಪಡೆದವರದೇ ಒಂದು ಗುಂಪಾಗಿ ವಿಭಾಗಿಸಿ (ಅಂದರೆ ಮೊದಲ ಮೂರು ಅಥವಾ ನಾಲ್ಕು ಸ್ಥಾನಗಳನ್ನು ಪಡೆಯುವವರ ಗುಂಪು) ಕೊನೆಯ ಸ್ಪರ್ಧೆ ನಡೆಸಬೇಕು. 3. ಉದ್ದ ಜಿಗಿತ ಹಾಗೂ ಎಸೆತದ ವಿಭಾಗದಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ಮೂರು ಅವಕಾಶಗಳನ್ನು ಕೊಡಬೇಕು. 4. ಪ್ರತಿಯೊಬ್ಬ ಸ್ಪರ್ಧಿಗೂ ಮೂರು ಜನ ಕಾಲ ವೀಕ್ಷಕರಿದ್ದು (ಟೈಮ್ ಕೀಪರ್ಸ್) ಅವರು ಸ್ಪರ್ಧಿಗಳು ಆಟ ಮುಗಿಸಲು ತೆಗೆದುಕೊಳ್ಳುವ ಅವಧಿಯನ್ನು ಗಣಿಸಬೇಕು. ಕಾಲವೀಕ್ಷಕರು ಉಪಯೋಗಿಸುವ ಮೂರು ನಿಲುಗಡಿಯಾರಗಳಲ್ಲಿ ಎರಡನ್ನು ಮಾತ್ರ ಬಳಸಿದರೆ, ಅವುಗಳೆರಡರಲ್ಲಿ ಯಾವುದು ಹೆಚ್ಚು ಅವಧಿಯನ್ನು ಸೂಚಿಸುತ್ತದೋ ಆ ಅವಧಿಯನ್ನೇ ಸ್ಪರ್ಧಿಯು ತೆಗೆದುಕೊಂಡ ಅವಧಿಯೆಂದು ಪರಿಗಣಿಸಬೇಕು. 5. ಓಟದ ಸ್ಪರ್ಧೆಯಲ್ಲಿ ಯಾವುದೇ ಸ್ಪರ್ಧಿ ಮೂರು ಫೌಲ್‍ಗಳನ್ನು ಮಾಡಿದ ಪಕ್ಷದಲ್ಲಿ ಅವನನ್ನು ಆ ಸ್ಪರ್ಧೆಗೆ ಅನರ್ಹನೆಂದು ಪರಿಗಣಿಸಬೇಕು. 6. ಪ್ರತಿಯೊಬ್ಬ ಸ್ಪರ್ಧಿ ಗಳಿಸುವ ಗೆಲ್ಲಂಕಗಳನ್ನು ಆ ಸ್ಪರ್ಧೆ ಮುಗಿದ ಅನಂತರವೇ ತಿಳಿಯಪಡಿಸಬೇಕು. 7. ಅತ್ಯಧಿಕ ಗೆಲ್ಲಂಕಗಳನ್ನು ಪಡೆಯುವಾತನನ್ನೇ ಜಯಶಾಲಿಯೆಂದು ತೀರ್ಮಾನಿಸಬೇಕು. 8. ಒಂದು ವೇಳೆ ಸ್ಪರ್ಧಿಗಳು ಸರಿಸಮ ಗೆಲ್ಲಂಕಗಳನ್ನು ಪಡೆದ ಪಕ್ಷದಲ್ಲಿ, ಯಾವ ಸ್ಪರ್ಧಿ ಅತ್ಯಧಿಕ ಅಂಕಗಳನ್ನು ಎಷ್ಟು ಸ್ಪರ್ಧೆಗಳಲ್ಲಿ ಗಳಿಸಿರುವನೆಂಬುದರ ಆಧಾರದ ಮೇಲೆ ಜಯಶಾಲಿ ಯಾರೆಂಬುದನ್ನು ತೀರ್ಮಾನಿಸಲಾಗುವುದು. ಒಂದು ವೇಳೆ ಅದರಲ್ಲೂ ಸರಿಸಮನಾದ ಪಕ್ಷದಲ್ಲಿ ಯಾವುದೇ ಒಂದು ಸ್ಪರ್ಧೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವಾತನನ್ನೇ ವಿಜಯಿಯೆಂದು ಘೋಷಿಸಲಾಗುವುದು. 9. ಯಾವುದೇ ಸ್ಪರ್ಧಿ ತಾನು ಭಾಗವಹಿಸುವ ಹತ್ತು ಸ್ಪರ್ಧೆಗಳಲ್ಲಿ ಯಾವುದಾದರೂ ಒಂದು ಸ್ಪರ್ಧೆಯಲ್ಲಿ ಭಾಗವಹಿಸದೇ ಹೋದರೆ ಅವನಿಗೆ ಯಾವ ಸ್ಥಾನವನ್ನೂ ಕೊಡಲಾಗುವುದಿಲ್ಲ.

	1904ರ ಸೇಂಟ್ ಲೂಯಿ ಒಲಿಂಪಿಕ್ಸ್‍ನಲ್ಲಿ ಡೆಕಾತ್ಲಾನ್ ಸ್ಪರ್ಧೆ ನಡೆಯಿತು. 1906, 1908ರಲ್ಲಿ ಸ್ಪರ್ಧೆ ಇರಲಿಲ್ಲ. 1912ರ ಸ್ಟಾಕ್‍ಹೋಮ್ ಒಲಿಂಪಿಕ್ಸ್‍ನಲ್ಲಿ ಸ್ಪರ್ಧೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಆ ಒಲಿಂಪಿಕ್ಸ್‍ನಲ್ಲಿ 8,412 ಪಾಯಿಂಟುಗಳ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಜೇಮ್ಸ್ ಥೊರ್ಪ್ (ಡೆಕಾತ್ಲಾನ್‍ಗೆ ಮೊದಲು ಜಿಮ್ ಪೆಂಟಾತ್ಲನ್‍ನಲ್ಲಿ ಚಿನ್ನ ಗೆದ್ದಿದ್ದರು.) ಅವರಿಗೆ ಆ ಸಂತೋಷ ಒಂದು ವರ್ಷಕ್ಕಿಂತ ಹೆಚ್ಚಿರಲಿಲ್ಲ. ಬೇಸ್‍ಬಾಲ್ ಲೀಗ್‍ನಲ್ಲಿ ಆಡಲು ಹಣ ತೆಗೆದುಕೊಂಡು, ವೃತ್ತಿಪರನಾಗಿದ್ದ ಎಂಬ ಆರೋಪದ ಮೇಲೆ, ಆತನ ಪದಕಗಳನ್ನು ವಾಪಸ್ಸು ಪಡೆದು, ದಾಖಲೆ ಪುಸ್ತಕದಿಂದ ಹೆಸರು ತೆಗೆಯಲಾಯಿತು. (ಒಲಿಂಪಿಕ್ ಕ್ರೀಡೆಗಳಲ್ಲಿ ಆಗ ಹವ್ಯಾಸಿಗಳು ಮಾತ್ರ ಭಾಗವಹಿಸಬೇಕಿತ್ತು.) 1982ರಲ್ಲಿ ಜಿಮ್ ಥೊರ್ಪ್ ವಿರುದ್ಧದ  ನಿರ್ಣಯವನ್ನು ಬದಲಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ, ಅವರ ಹೆಸರನ್ನು ದಾಖಲೆ ಪುಸ್ತಕದಲ್ಲಿ ಸೇರಿಸಿತಲ್ಲದೆ, 1983ರಲ್ಲಿ ಪದಕಗಳನ್ನು ಅವರ ಮಕ್ಕಳಿಗೆ ನೀಡಿತು.
											(ಟಿ.ಆರ್.ಎಸ್.)
										(ಪರಿಷ್ಕರಣೆ : ಜಿ. ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ